ಸರಸ್ವತಿ ನದಿಯ ಕಣ್ಮರೆ, ಏನು ಸಂಭವಿಸಿರಬಹುದು?

ಕನ್ನಡ ರೂಪಾಂತರ : ಅನಿತಾ ಮಂಜುನಾಥ.

ಅಲಹಾಬಾದ್ ಅಥವಾ ಪ್ರಯಾಗ್ ರಾಜ್ ಭಾರತೀಯರಿಗೆ ಅತ್ಯಂತ ಪವಿತ್ರ ತಾಣಗಳಲ್ಲಿ ಒಂದು. ಇಲ್ಲಿ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮವಾಗುತ್ತದೆ. ಈ ಪವಿತ್ರ ಸಂಗಮದಲ್ಲಿ ಮುಳುಗಿ ಏಳುವುದರಿಂದ ಮಾನವನ ಜೀವನದ ಪಾಪವೆಲ್ಲ ತೊಳೆದು ಹೋಗುತ್ತದೆ ಎಂದು ಸನಾತನ ಧರ್ಮ ಗ್ರಂಥಗಳು ಉಲ್ಲೇಖಿಸುತ್ತವೆ.
ಸಪ್ತ ಸಿಂಧುವಿನಲ್ಲಿ ಹರಿಯುವ ಏಳು ನದಿಗಳಲ್ಲಿ ಸರಸ್ವತಿಯೂ ಒಂದು. ಉಳಿದವು — ಸಿಂಧೂ, ಝೆಲಂ, ಚೀನಾಬ್, ರವಿ, ಬಿಯಾಸ್, ಮತ್ತು ಸಟ್ಲೆಜ್.. ಸರಸ್ವತಿ ನದಿಯು ಭಾರತದ ವಾಯವ್ಯ ದಲ್ಲಿರುವ ಮರಳುಗಾಡಿನಲ್ಲಿ ಇಂಗಿ ಹೋಗಿದ್ದು, ಗುಪ್ತಗಾಮಿನಿಯಾಗಿ ಭೂಮಿಯ ಒಳಗೆ ಹರಿಯುತ್ತಿದೆ ಎಂದು ಹಲವು ಭಾರತೀಯರು ನಂಬುತ್ತಾರೆ. ಹಾಗಾದರೆ ಆ ನದಿಗೆ ಏನಾಗಿರಬಹುದು?

ಪ್ರಾಚೀನ ಸಾಹಿತ್ಯದಲ್ಲಿ ಸರಸ್ವತಿ ನದಿಯ ಉಲ್ಲೇಖ.

ಋಗ್ ವೇದವು ಸರಸ್ವತಿಯನ್ನು  ‘ ನದಿ ಮಾತಾ ‘ ಅಥವಾ, ನದಿಗಳ ತಾಯಿ ಎಂದು ಕರೆಯುತ್ತದೆ.  ಪರ್ವತಗಳಿಂದ ಹರಿದುಬಂದು ಸಾಗರವನ್ನು ಸೇರುವ ಅದ್ಭುತ ನದಿ ಎನ್ನುತ್ತದೆ. ಆ ನದಿಯನ್ನು ಜ್ಞಾನ ಧಾರೆ ಎಂದು, ಅರಿವಿನ ಚಿಲುಮೆ ಎಂದೂ ವರ್ಣಿಸಲಾಗಿದೆ. ಇದೆ ನದಿಯ ದಡದ ಮೇಲೆ ವೇದಗಳು ರಚಿತವಾದುವು. ದೇವ ಪುತ್ರನಾದ ಮನುವು ಸರಸ್ವತಿ ಮತ್ತು ಅದರ ಉಪ ನದಿಯಾದ ಧೃಷಧ್ವತಿ ಗಳ ನಡುವೆ ಬ್ರಹ್ಮಾವಾರ್ತವನ್ನು ಸ್ಥಾಪಿಸಿದನೆಂದು ಮನು ಸ್ಮೃತಿ ಸಾರುತ್ತದೆ.

ಸರಸ್ವತಿ -ಸಿಂಧೂ ನಾಗರೀಕತೆ.

ಸಿಂಧೂ ನಾಗರೀಕತೆಯ ಹಲವು ಪಟ್ಟಣಗಳು ಸರಸ್ವತಿ ನದಿ ದಡದ ಮೇಲೆ ಸ್ಥಾಪಿತವಾಗಿದ್ದವು. ಹಾಗಾಗಿ ಅದನ್ನು ಸಿಂಧೂ – ಸರಸ್ವತಿ ನಾಗರೀಕತೆ ಎಂದೂ ಕರೆಯಲಾಗುತ್ತದೆ. ಕಾಲಿ ಬಂಗಾನ್, ಬನವಾಳಿ, ರಾಖಿ ಘರಹೀ, ಧೋಲಾವಿರ, ಮತ್ತು ಲೋಥಲ್, ಇವು ಪ್ರಸಿದ್ಧ ಪಟ್ಟಣಗಳು. ಸಿಂಧೂ ನಾಗರೀಕತೆಯ ಲಿಪಿಯು ಇನ್ನೂ ನಿಗೂಢವಾಗಿಯೇ ಉಳಿದಿದ್ದು, ಆ ಜನರು ಸರಸ್ವತಿ ನದಿಯನ್ನು ಪವಿತ್ರ ಎಂದು ಭಾವಿಸಿದ್ದರೆ, ಅಥವಾ ಆ ನದಿ ಋಗ್ವೇದದಲ್ಲಿ ವರ್ಣಿಸಿದಷ್ಟು ಅಮೋಘವಾಗಿತ್ತೇ ಎಂಬುದು ಸ್ಪಷ್ಟವಿಲ್ಲ.

ಆ ನದಿಯು ಹರಿಯುತ್ತಿತ್ತು ಎಂದು ಹೇಳಲಾಗುವ ಜಾಗ ಇಂದಿನ ಪ್ರಯಾಗ್ ರಾಜ್ ಗೆ ಸಮೀಪವಿಲ್ಲ. ಹಾಗಿದ್ದರೆ ಅಲ್ಲಿ ತ್ರಿವೇಣಿ ಸಂಗಮವಾಗುವುದು ಹೇಗೆ ಸಾಧ್ಯ? ಸರಸ್ವತಿ ನದಿಯ ಹಲವಾರು ಶಾಖೆಗಳು ಯಮುನಾ ನದಿಯೊಂದಿಗೆ ಸೇರಿದ್ದರಿಂದ, ಗಂಗೆಯೊಡನೆ ಆ ನದಿಯೂ ಸೇರಿ ಸಂಗಮವಾಯಿತoದು ಹಲವರ ಅಭಿಪ್ರಾಯ.

ಯಕ್ಷ ಪ್ರಶ್ನೆ.
 
ಸರಸ್ವತಿಯಂಥ ಅದ್ಭುತ ನದಿಗೆ ಏನಾಗಿರಬಹುದು? ಋಗ್ವೇದ ದಲ್ಲಿ ವರ್ಣಿತವಾದಂತೆ ಅದು ನಿಜವಾಗಿಯೂ ಹರಿಯುತ್ತಿತ್ತೆ? ಹಾಗಿದ್ದರೆ ಅದು ಏಕೆ ಇಂಗಿ ಹೋಯಿತು? ಅದಕ್ಕೂ ಮುಂಚೆ, ಇಂದಿನ ಯಾವ ನದಿಯನ್ನು ಸರಸ್ವತಿಯೊಂದಿಗೆ ಗುರುತಿಸಬಹು ಎಂದು ನೋಡೋಣ. ಎರಡು ನದಿಗಳನ್ನು ಪರಿಗಣಿಸಬಹುದು. ಭಾರತ ಪಾಕಿಸ್ತಾನಗಳಲ್ಲಿ ಹರಿಯುವ ಘಗ್ಗರ್ – ಹಾಕ್ರ ನದಿ ಮತ್ತು, ಆಫ್ಗಾನಿಸ್ಥಾನದಲ್ಲಿ ಹರಿಯುವ ಹೇಲ್ಮಂಡ್ ನದಿ.

ಘಗ್ಗರ್ -ಹಾಕ್ರ ನದಿ.

ಋಗ್ವೇದದ ಪ್ರಕಾರ ಸರಸ್ವತಿಯು ಸಟ್ಲೆಜ್ ಮತ್ತು ಯಮುನಾ ನದಿಗಳ ನಡುವೆ ಹರಿಯುತ್ತಿತ್ತು. ಹಾಗಿದ್ದರೆ ಇಂದಿನ ಘಗ್ಗರ್ – ಹಾಕ್ರ ನದಿಯು ಆ ಜಾಗದಲ್ಲಿ ಹರಿಯುವ ಪ್ರಮುಖ ನದಿಯಾಗಿದೆ. ಪುರಾಣಗಳು ಮತ್ತು ಮಹಾಭಾರತದಲ್ಲಿ ಉಲ್ಲೇಖವಾಗುವ ಸರಸ್ವತಿ ನದಿ ದಡದ ನಗರಗಳ ವಿವರ ನೋಡಿದರೆ ಅವು ಘಗ್ಗರ್ – ಹಾಕ್ರ ನದಿಯ ಇಕ್ಕೆಲಗಳಲ್ಲಿರುವ ಪಟ್ಟಣಗಳಿಗೆ ಹೋಲಿಕೆಯಾಗುತ್ತವೆ. ಆದರೆ ಇದು ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯಾಗಿದ್ದು, ಸಾಗರವನ್ನು ಸೇರದೆ ಒಳ ನಾಡಿನಲ್ಲೇ ಇಂಗಿ ಹೋಗುತ್ತದೆ. ಘಗ್ಗರ್ ನದಿಯ ಪಾತ್ರದಲ್ಲಿ ಹಿಂದೆ ಒಂದು ಮಹಾ ನದಿಯು ಹರಿಯುತ್ತಿತ್ತು ಎಂದು ಭೂ ಗರ್ಭ ವಿಜ್ಞಾನಿಗಳು ನಿರೂಪಿಸಿದ್ದಾರೆ. ಆದರೆ ಆ ನದಿಯು ಮಳೆಗಾಲದ ನದಿಯಾಗಿದ್ದು, ವೇದದಲ್ಲಿ ವರ್ಣಿತವಾದಂತೆ ನೀರ್ಗಲ್ಲಿನಿಂದ ಉಗಮವಾದದ್ದಲ್ಲ ಎನ್ನುತ್ತಾರೆ.

ಸರಸ್ವತಿ ನದಿ ಏಕೆ ಇಂಗಿ ಹೋಯಿತು? ಕೆಲವರ ಪ್ರಕಾರ ಹವಾಮಾನ ವ್ಯಪರೀತ್ಯದಿಂದ, ಮಳೆ ಬೀಳುವುದು ಕಡಿಮೆಯಾಗಿ, ನದಿ ಇಂಗಿ ಹೋಯಿತು. ಆ ಬರಗಾಲದ ಕಾರಣ ಹರಪ್ಪದ ಜನ, ತಮ್ಮ ಊರುಗಳನ್ನು ತ್ಯಜಿಸಿ, ಪೂರ್ವ ದಿಕ್ಕಿಗೆ, ಅಂದರೆ, ಉತ್ತರ ಭಾರತದ ಕಡೆ ವಲಸೆ ಹೋದರು.

ಇನ್ನೂ ಹಲವರ ಪ್ರಕಾರ, ಯುಮುನ ಹಾಗೂ ಸಟ್ಲೆಜ್ ಎರಡೂ ಸರಸ್ವತಿಯ ಉಪ ನದಿಗಳು. ಭೂ ಗರ್ಭದ ಭೂ ರಚನಾ ಫಲಕಗಳ ಚಲನೆಯ ಕಾರಣ, ಆ ಪ್ರದೇಶದಲ್ಲಿ ಬದಲಾವಣೆಗಳಾಗಿ, ಯಮುನಾ ಹಾಗೂ ಸಟ್ಲೆಜ್ ನದಿಗಳು ತಮ್ಮ ಪಾತ್ರ ಬದಲಾಯಿಸಿದವು. ಆ ಕಾರಣ ಸರಸ್ವತಿ ನದಿಗೆ ನೀರಿನ ಹರಿವು ಕಡಿಮೆಯಾಗಿ, ಅದು ಮಳೆಗಾಲದ ನದಿಯಾಯಿತು.

ಅಹ್ಮದಾಬಾದಿನ ಸಂಶೋಧನಾಲಯ, ಮತ್ತು ಐ. ಐ. ಟಿ. ಮುಂಬೈ ಪ್ರಕಾರ, ಸರಸ್ವತಿ ನದಿ ಹಿಮಾಲಯದ ನೀರ್ಗಲ್ಲಿನಲ್ಲಿ ಉಗಮವಾಗುತ್ತಿತ್ತು. ಅವರ ಪ್ರಕಾರ ಘಗ್ಗರ್ ನದಿಯು ಎರಡು ಕಾಲ ಘಟ್ಟ ಗಳಲ್ಲಿ ನಿರಂತರ ಹರಿಯುವ ನದಿಯಾಗಿತ್ತು. ಅದು 80,000 ವರ್ಷಗಳ  ಹಿಂದೆ, ಮತ್ತು, 9000 ದಿಂದ 4500 ವರ್ಷಗಳ ಹಿಂದೆ. ಇವುಗಳಲ್ಲಿ ಎರಡನೆಯ ಕಾಲಘಟ್ಟ ವನ್ನು ಋಗ್ವೇದದ ಮತ್ತು ಹರಪ್ಪ ಸಂಸ್ಕೃತಿಯ  ಮೂಲವಾದ ಸರಸ್ವತಿ ನದಿಯ ಸಮಕಾಲ ಎಂದು ಹೇಳಬಹುದು.

ಘಗ್ಗರ್ ನದಿಯೇ ಸರಸ್ವತಿ ಎಂದು ಹೇಳಲು ಹಲವಾರು ತೊಡಕುಗಳು ಇವೆ .ಘಗ್ಗರ್ ನದಿಯು ಹಿಮಾಲಯದ ಮೇಲ್ಸ್ತರದ ನೀರ್ಗಲ್ಲಿನಿಂದ ಉಗಮವಾಗದೆ, ಕೆಳಸ್ತರದಲ್ಲಿ ಜನಿಸುತ್ತದೆ.

ವೇದಗಳು ಮತ್ತು ಪುರಾಣಗಳ ಕಾಲಕ್ಕೆ ಸರಸ್ವತಿ ನದಿ ಕಾಣೆಯಾಗಿತ್ತು. ಘಗ್ಗರ್ ನದಿಯ ಕೆಳ ಹರಿವಿನಲ್ಲಿ ಯಮುನಾ ಮತ್ತು ಸಟ್ಲೆಜ್ಗಳ ಹರಿವಿನ ಒತ್ತಾಸೆ ಇದ್ದರೂ, ಉಗಮ ಸ್ಥಾನದಲ್ಲಿ ಘಗ್ಗರ್ ಈಗಿರುವಂತೆಯೇ ಸಣ್ಣ ಹರಿವಿನದ್ದಾಗಿರುತ್ತದೆ.. ಭೂ ಗರ್ಭ ವಿಜ್ಞಾನಿಗಳ ಪ್ರಕಾರ ಘಗ್ಗರ್ ನದಿಯು ಯಾವಾಗಲೂ ಮಳೆನೀರಿನಿಂದ ಹರಿವು ಪಡೆಯುತ್ತಿತ್ತು. ಹೀಗಾಗಿ ವಿಜ್ಞಾನಿ ಗಳು ಮತ್ತು ಇತಿಹಾಸಕಾರರು, ಆಫ್ಘನೀಸ್ಥಾನದ ಹೇಲ್ಮಂಡ್ ನದಿಯೇ ಸರಸ್ವತಿ ಇರಬಹುದು ಎಂದು ಅಭಿಪ್ರಾಯ ಪಡುತ್ತಾರೆ.

ಹೇಲ್ಮಂಡ್ ನದಿ.

ಇರಾನಿಯನ್ನರ ( ಪರ್ಷಿಯನ್ನರ ) ಅವೆಸ್ತಾನ್ ಭಾಷೆ ಯಲ್ಲಿ ಹೇಲ್ಮಂಡ್ ನದಿಗೆ ಹರಕ್ಸ್ ವತಿ ಅಥವಾ ಹರ್ಕಾವತಿ, ಎನ್ನುತ್ತಿದ್ದರು. ಈ ಎರಡೂ ಹೆಸರುಗಳು ಸರಸ್ವತಿಗೆ ಸಮೀಪವಾಗಿವೆ. ಹೇಲ್ಮಂಡ್ ನದಿಯು ಹಿಂದೂ ಖುಷ್ ಪರ್ವತದ ನೀರಗಲ್ಲಿನಲ್ಲಿ ಉಗಮವಾಗಿ, ಹರಿದು, ಒಂದು ದೊಡ್ಡ ಜವುಗು ಪ್ರದೇಶದಲ್ಲಿ ಕೊನೆಗೂಳ್ಳುತ್ತದೆ. ಆ ಜವುಗನ್ನೇ, ಸರಸ್ವತಿ ನದಿಯು ಸೇರುವ ಸಮುದ್ರ ಎಂದು ಕರೆದಿರಬಹುದು. ಪುರಾತನ ಇರಾನಿ ಜನರ ಧರ್ಮವಾಗಿದ್ದ ಜೋರಾಷ್ಟ್ರೀಯನ್ ಧರ್ಮದ ಪವಿತ್ರ ಗ್ರಂಥ ಅವೆಸ್ತಾ ದಲ್ಲಿ, ವೇದಗಳಲ್ಲಿ ಸರಸ್ವತಿ ವರ್ಣಿತವಾದಂತೆ, ಹೇಲ್ ಮಂಡ್ ನದಿಯು ವರ್ಣಿತವಾಗಿದೆ.

ಆರ್ಯರು ಭಾರತಕ್ಕೆ ಬಂದ ದಾರಿ.

ಇದರಲ್ಲೂ ಭಿನ್ನಾಭಿಪ್ರಾಯ ಇದೆ. ವೇದ ಕಾಲೀನ ಜನರು ಹೇಲ್ ಮಂಡ್ ನದಿ ತೀರದಿಂದ ಘಗ್ಗರ್ ನದಿ ತೀರಕ್ಕೆ, ಅಂದರೆ ಗಂಗಾ ಸಮತಟ್ಟು ಪ್ರದೇಶಕ್ಕೆ ವಲಸೆ ಬಂದಿದ್ದರಿಂದ, ಘಗ್ಗರ್ ನದಿಯನ್ನು ಹೇಲ್ ಮಂಡ್ ನದಿಗೆ ಸಮೀಕರಿಸಿ, ಅದೇ ಹೆಸರು ಇಟ್ಟರು. ಋಗ್ವೇದದ ಮೊದಲ ಭಾಗಗಳು, ಹೇಲ್ ಮಂಡ್ ನದಿ ತೀರದಲ್ಲಿ ರಚಿತವಾದವು. ನಂತರ ಅವರು ಪೂರ್ವಕ್ಕೆ ವಲಸೆ ಹೋದಂತೆಲ್ಲ, ಹೇಲ್ ಮಂಡ್ ನದಿ ಮರೆಯಾಗಿ, ಸಣ್ಣ ಘಗ್ಗರ್ ನದಿ ತೀರ ತಲುಪಿದರು. ಋಗ್ವೇದದ ಉಳಿದ ಭಾಗಗಳು ಅಲ್ಲಿಯೇ ರಚಿತವಾದವು.

ಪವಿತ್ರ ಸರಸ್ವತಿ ನದಿಯನ್ನು ಕಂಡುಹಿಡಿದು, ಪುನರುಜ್ಜೀವನ ಗೊಳಿಸಲು ಹಲವು ಹಿಂದೂ ಧರ್ಮ ಸಂಘಟನೆಗಳು ಯತ್ನಿಸುತ್ತಿವೆ. ಸರಸ್ವತಿಯು, ಬರಿದೆ ನದಿಯಾಗಿರದೆ, ಜ್ಞಾನ ಮತ್ತು ಅರಿವಿನ ದೇವತೆಯಾಗಿದ್ದಾಳೆ. ನಮ್ಮ, ನಿಮ್ಮ ಒಳಗಿನ ಸರಸ್ವತಿಯು, ಅಜ್ಞಾನದ ಅಂಧಕಾರದಲ್ಲಿ ಮುಳುಗಿರುವುದರಿಂದ, ಜ್ಞಾನ ಮತ್ತು ಅರಿವುಗಳ ಆಗರವಾದ, ಆ ಸರಸ್ವತಿಯನ್ನು ನಮ್ಮಲ್ಲಿ ಪುನರುಜ್ಜೀವನಗೊಳಿಸೋಣ.

 

 

 

Author: Mahima Prasad

Doctor, dog enthusiast, UPSC aspirant

One thought on “ಸರಸ್ವತಿ ನದಿಯ ಕಣ್ಮರೆ, ಏನು ಸಂಭವಿಸಿರಬಹುದು?”

  1. ಸರಸ್ವತಿ ನದಿಯ ಕುರಿತಾದ ಅತ್ಯುತ್ತಮ ಸಂಶೋಧನಾತ್ಮಕ ಲೇಖನ. ನೀವು ಹೇಳಿದ ನದಿಗಳಾದ ಹೇಲ್ ಮಂಡ್ ಮತ್ತು ಘಗ್ಗರ್ ನದಿಗಳೆರಡೂ ಸರಸ್ವತಿ ನದಿಯಾಗಿರುವ ಎಲ್ಲಾ ಸಾಧ್ಯತೆಗಳಿವೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: