ಭಾರತ ಕಮ್ಯುನಿಸಂ ಅನ್ನು ಅಳವಡಿಸಿಕೊಳ್ಳಬೇಕೆ?

ಕನ್ನಡ ಅವತರಣಿಕೆ - ಅನಿತಾ ಮಂಜುನಾಥ.

ಇತ್ತೀಚಿನ ಕರೋನವೈರಸ್ ಸಾಂಕ್ರಾಮಿಕವಾಗಿ ಹರಾಡುತ್ತಿರುವ ಸಮಯದಲ್ಲಿ, ಹೆಚ್ಚುತ್ತಿರುವ ಜನರ ಸಂಖ್ಯೆಯನ್ನು ಎದುರಿಸಲು ಹೆಚ್ಚಿನ ಮೂಲಸೌಕರ್ಯಗಳ ಅಗತ್ಯವಿದೆ ಎಂದು ಚೀನಾ ಅರಿತುಕೊಂಡಿದೆ.  ಅವರು ಎರಡು ಆಸ್ಪತ್ರೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು (ಪೂರ್ವನಿರ್ಮಿತ ಕಟ್ಟಡ ಸಾಮಗ್ರಿಗಳಿಂದ – ಏಕೆಂದರೆ, ಅಂಥ ನಿರ್ಮಾಣವನ್ನು ತಳಪಾಯದಿಂದ ಶುರುಮಾಡಿ ಕಟ್ಟುವುದು ಹಾಗ್ವಾರ್ಟ್ ಗಳಿಗೆ ಮಾತ್ರ ಸಾಧ್ಯವೇನೋ!!!) ಮತ್ತು 10 ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತಂದರು. ಇದಕ್ಕೆ ವ್ಯತಿರಿಕ್ತವಾಗಿ, ವಿಶ್ವ ಬ್ಯಾಂಕ್ ಮುಂಬೈನ ಭಾರತದ ಸಾಂತಾ ಕ್ರೂಜ್- ಚೆಂಬೂರ್ ಲಿಂಕ್ ರಸ್ತೆಯನ್ನು ‘ವಿಶ್ವದ ಅತ್ಯಂತ ವಿಳಂಬವಾದ ರಸ್ತೆ ಯೋಜನೆ’ ಎಂದು ಹೆಸರಿಸಿದೆ.

ನಮ್ಮಲ್ಲಿ ಅನೇಕ ಭಾರತೀಯರು ಇದರ ಬಗ್ಗೆ ಏನು ಹೇಳುತ್ತಾರೆ?  ‘ಚೀನಾ ಕಮ್ಯುನಿಸ್ಟ್ ದೇಶ, ಬ್ರೋ. ಆ ಸರ್ಕಾರವು ಜನರನ್ನು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದದಂತೆ ತಡೆಯಬಹುದು, ಹಾ.  ಭಾರತದಲ್ಲಿಯೂ ನಾವು ಇದನ್ನು ಜಾರಿಗೆ ತರಬೇಕು . ’

ಮೊದಲನೆಯದಾಗಿ, ಕಮ್ಯುನಿಸಂ ಎಂದರೇನು?

ಇದು ಸಾಮಾಜಿಕ ಸಂಘಟನೆಯ ಒಂದು ವ್ಯವಸ್ಥೆಯಾಗಿದ್ದು, ಇದರಲ್ಲಿ ಎಲ್ಲಾ ಆಸ್ತಿಗಳು (ಸಂಪನ್ಮೂಲಗಳನ್ನು ಒಳಗೊಂಡಂತೆ) ಸಮುದಾಯದ ಒಡೆತನದಲ್ಲಿದೆ (ಅಂದರೆ, ಖಾಸಗಿ ಮಾಲೀಕತ್ವದ ಯಾವುದೇ ಪರಿಕಲ್ಪನೆ ಇಲ್ಲ) ಮತ್ತು ಪ್ರತಿಯೊಬ್ಬ ವ್ಯಕ್ತಿಯು ಅವರ ಸಾಮರ್ಥ್ಯ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಪ್ರತಿಫಲವನ್ನು ಪಡೆಯುತ್ತಾನೆ (ಅಂದರೆ ಸಂಪನ್ಮೂಲಗಳ ವಿತರಣೆಯನ್ನು ಸಮುದಾಯಕ್ಕಾಗಿ ನಿಯಂತ್ರಿಸಲಾಗುತ್ತದೆ ).  ಯಾವುದೇ ವರ್ಗವಿಲ್ಲ (ಬಂಡವಾಳಶಾಹಿಯಾಗಲಿ ಅಥವಾ ಕಾರ್ಮಿಕರಾಗಲಿ ), ಹಣ ಮತ್ತು ರಾಜ್ಯವೂ ಇಲ್ಲ. ಸಮುದಾಯದ ಸ್ಥಳವನ್ನು ಸರ್ಕಾರ ಅಕ್ರಮಿಸಿದ್ದು,, ಅದು ಸರ್ವಶಕ್ತವಾಗಿರುತ್ತದೆ. 

ಇಂದು, ಚೀನಾ, ಕ್ಯೂಬಾ, ವಿಯೆಟ್ನಾಂ, ಲಾವೋಸ್ ಮತ್ತು ಉತ್ತರ ಕೊರಿಯಾ ಮಾತ್ರ ಕಮ್ಯುನಿಸ್ಟ್ ಆಗಿ ಉಳಿದಿರುವುದು , ಕಮ್ಯುನಿಸ್ಟ್ ಯು.ಎಸ್.ಎಸ್.ಆರ್ ವಿರುದ್ಧ ಬಂಡವಾಳಶಾಹಿ ಯು.ಎಸ್.ಎ ವಿಜಯದ ಹೆಗ್ಗುರುತಾಗಿದೆ. ತಾವು ಸಮಾಜವಾದದ ಸ್ಥಾಪನೆಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಾರೆ.  ಚೀನಾ ಬಹಳ ಹಿಂದೆಯೇ ಕಮ್ಯುನಿಸ್ಟ್ ಆರ್ಥಿಕ ಮಾದರಿಯನ್ನು ಕೈಬಿಟ್ಟಿದೆ.  ಅದರ ಸರ್ಕಾರಿ ಉದ್ಯಮಗಳು ಉತ್ತಮವಾಗಿ ಖಾಸಗಿ ವಲಯದೊಂದಿಗೆ ಸಹಬಾಳ್ವೆ ನಡೆಸುತ್ತವೆ ಮತ್ತು ಇದು ಮಾರುಕಟ್ಟೆ ಆಧಾರಿತ ಆರ್ಥಿಕ ನೀತಿಯನ್ನು ಹೊಂದಿದೆ.  ಕಮ್ಯುನಿಸಂ, ಅದರ ಶುದ್ಧ ರೂಪದಲ್ಲಿ, ಇನ್ನು ಮುಂದೆ ಕಾರ್ಯನಡೆಸುವುದು ಅಸಾಧ್ಯ.

ಇತಿಹಾಸದ ಪ್ರಭಾವ

15 ನೇ ಶತಮಾನದಲ್ಲಿ, ಸಾಮ್ರಾಜ್ಯಶಾಹಿ ಶಕ್ತಿಗಳು ಪ್ರಬಲ, ಕೇಂದ್ರೀಕೃತ ಆಡಳಿತ ಹೊಂದಿದ್ದ, ಮತ್ತು ತನ್ನ ದೇಶೀಯ ಅಸ್ಮಿತೆಯ ಸಂಪೂರ್ಣ ಅರಿವನ್ನು ಹೊಂದಿದ್ದ ಚೀನಾದ ಜೊತೆ ವ್ಯವಹರಿಸಬೇಕಾಗಿತ್ತು.  ಚೀನಾ ಎಂದಿಗೂ ಸಾಮ್ರಾಜ್ಯಶಾಹಿ ಶಕ್ತಿಗಳಿಂದ ಸಂಪೂರ್ಣವಾಗಿ ವಸಾಹತುಶಾಹಿಯಾಗಿರಲಿಲ್ಲ, ವಸಾಹತುಶಾಹಿ ದೇಶಗಳು ಚೀನಾದಲ್ಲಿ ಹಲವೇ ಹಲವು ಪ್ರಭಾವಿ ವಲಯಗಳನ್ನು , ಮತ್ತು ವ್ಯಾಪಾರ ರಿಯಾಯಿತಿಗಳನ್ನು ಮಾತ್ರ ಹೊಂದಿದ್ದರು. ವಸಾಹತುಶಾಲಿ ದೇಶಗಳು ಕ್ವಿಂಗ್ ರಾಜವಂಶವಾಗಲಿ ಅಥವಾ ಚೀನಾದ ರಾಷ್ಟ್ರೀಯವಾದಿಗಳೊಂದಿಗಾಗಲಿ, ಅಧಿಕಾರ ಹಂಚಿಕೆಯ ಮೂಲಕ ಚೀನಾವನ್ನು ನಿಯಂತ್ರಿಸಲು ಪ್ರಯತ್ನಿಸಿದರು.  ಆದ್ದರಿಂದ ಚೀನಿಯರು ಪಾಶ್ಚಿಮಾತ್ಯ ಪ್ರಜಾಪ್ರಭುತ್ವದ ಆದರ್ಶಗಳೊಂದಿಗೆ ನಿಕಟ ಸಂಪರ್ಕಕ್ಕೆ ಬರಲಿಲ್ಲ.

ರಷ್ಯಾ ಕೂಡ ಚೀನಿಯರ ಮೇಲೆ ತೀವ್ರ ಪ್ರಭಾವ ಬೀರಿತು.  ಚೀನಾದ ಹಲವಾರು ಬುದ್ಧಿಜೀವಿಗಳು ರಷ್ಯಾದ ಕ್ರಾಂತಿಯನ್ನು ದೇಶದ ಅಸಮಾನತೆ, ವಿದೇಶಿ ಹಸ್ತಕ್ಷೇಪಗಳು, ರಾಜಕೀಯ ಅವ್ಯವಸ್ಥೆ ಮತ್ತು ಅಭಿವೃದ್ಧಿಯಿಲ್ಲದ ಬೆಳವಣಿಗೆಗೆ ಪರಿಹಾರವಾಗಿ ನೋಡಿದರು.  ಕಮ್ಯುನಿಸ್ಟ್ ಆಡಳಿತವನ್ನು ಸ್ಥಾಪಿಸಿದ ಮೇ 4 ರ ಕ್ರಾಂತಿಯು ರಾಷ್ಟ್ರೀಯವಾದಿಗಳು ಮತ್ತು ಕಮ್ಯುನಿಸ್ಟರ ನಡುವಿನ ಯುದ್ಧವಾಗಿತ್ತು.  ಚೀನಿ ಜನರಿಗೆ ತಮ್ಮ ವೈಯಕ್ತಿಕ ಹಕ್ಕುಗಳಿಗಿಂತ ಹೆಚ್ಚಾಗಿ, ಬಲವಾದ ರಾಜ್ಯವನ್ನು ಸ್ಥಾಪಿಸುವುದು ಮುಖ್ಯವಾಗಿತ್ತು ಎಂದು ನಾವು ತೀರ್ಮಾನಿಸಬಹುದು.

ಆದರೆ, ಭಾರತದಲ್ಲಿ, ಸ್ವಾತಂತ್ರ್ಯ ಹೋರಾಟವು ಬ್ರಿಟಿಷ್ ಆಡಳಿತವನ್ನು ಉರುಳಿಸುವ ಒಂದು ಚಳುವಳಿಯಾಗಿತ್ತು, ಅಂದಿನ ನಾಯಕರಲ್ಲಿ ಅದು ರಾಜಕೀಯ ಸಿದ್ಧಾಂತಗಳ ಅಭಿವೃದ್ಧಿ ಮತ್ತು ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಕ್ರಿಯೆಯಾಗಿತ್ತು. ಪ್ರಜಾಪ್ರಭುತ್ವದ ಸ್ಥಾಪನೆ ಮತ್ತು ನಾಗರಿಕ ಹಕ್ಕುಗಳ ಖಾತರಿಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಮುಖ ಉದ್ದೇಶಗಳಾಗಿತ್ತು..  ವಾಸ್ತವವಾಗಿ, ಸ್ವಾತಂತ್ರ್ಯದ ಬೇಡಿಕೆಗಳು ಜನರ ಸ್ವ-ನಿರ್ಣಯದ ಪ್ರಚೋದನೆಯಿಂದ ಹುಟ್ಟಿಕೊಂಡಿದ್ದವು . ಭಾರತೀಯ ಸಮಾಜದ ಬಹುತೇಕ ಎಲ್ಲಾ ವರ್ಗಗಳು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ತಮ್ಮ ವಿವಿಧ ಬೇಡಿಕೆಗಳಿಗಾಗಿ ಆಂದೋಲನ ನಡೆಸಿದರು.  ಯುವ ಕ್ರಾಂತಿಕಾರಿಗಳು ತಮ್ಮ ಪ್ರಾಣವನ್ನು ತ್ಯಜಿಸಿದರು, ಮಹಿಳೆಯರು ತಮ್ಮ ಚಿನ್ನವನ್ನು ದಾನ ಮಾಡಿದರು ಮತ್ತು ಜನರು ಸ್ವಇಚ್ಛೆೆ ಯಿಂದ ಬ್ರಿಟಿಷರ ಲಾಠಿ ಪ್ರಹಾರಕ್ಕೆ ತಮ್ಮನ್ನು ಒಡ್ಡಿಕೊಂಡರು..  ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳು ಭಾರತೀಯರಲ್ಲಿ ಆಳವಾಗಿ ಬೇರೂರಿದೆ ಮತ್ತು ಅವುಗಳು ಸಂವಿಧಾನದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಲ್ಪಟ್ಟಿವೆ.

ಕಮ್ಯುನಿಸಂ ಭಾರತಕ್ಕೆ ಏನಾದರೂ ಒಳ್ಳೆಯದನ್ನು ಮಾಡಬಹುದೇ?

ಭಾರತವು ಅನೇಕ ವೈವಿಧ್ಯತೆಗಳನ್ನು ಒಳಗೊಂಡ ದೇಶ., ವಿವಿಧ ಭಾಷೆ, ಧರ್ಮ, ಜನಾಂಗ ಮತ್ತು ಸಂಸ್ಕೃತಿಯನ್ನು ಹೊಂದಿದ ದೇಶವಾಗಿದೆ.  ಅಂತಹ ದೇಶವನ್ನು ಒಟ್ಟಿಗೆ ಹಿಡಿದಿಡಲು, ಎಲ್ಲ ರೀತಿಯ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವ ರಾಜಕೀಯ ವ್ಯವಸ್ಥೆಯನ್ನು ಹೊಂದಿರುವುದು ಅತ್ಯಗತ್ಯ.  ಕಮ್ಯುನಿಸಂ, ಭಿನ್ನಾಭಿಪ್ರಾಯದ ಬಗ್ಗೆ ಅಸಹಿಷ್ಣುತೆಹೊಂದಿರುವುದರಿಂದ ದೇಶದ ಒಗ್ಗಟ್ಟಿಗೆ ಮಾರಕವಾಗಬಹುದು..

1975 ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರುವುದು ಕಾಂಗ್ರೆಸ್ ಸರ್ಕಾರದ ಅಧಿಕಾರ ಕೇಂದ್ರೀಕರಣ ನೀತಿಗಳು ಮತ್ತು ಸರ್ವಾಧಿಕಾರದ ಪರಾಕಾಷ್ಠೆಯಾಗಿತ್ತು .  ಇದು ಕರಾಳ ಸಮಯವಾಗಿತ್ತು, ಆಕೆಯ ತಂದೆ ಪಂಡಿತ್ ಜವಾಹರಲಾಲ್ ನೆಹರೂ ಅವರು ಶ್ರಮದಾಯಕವಾಗಿ ನಿರ್ಮಿಸಿದ ಸಂಸ್ಥೆಗಳನ್ನು ಇಂದಿರಾ ದುರ್ಬಲಗೊಳಿಸಿದರು.  ಮುಂದಿನ ಚುನಾವಣೆಗಳಲ್ಲಿ, ಭಾರತೀಯರು ಬೇರೆ ಪಕ್ಷವನ್ನು ಅಧಿಕಾರಕ್ಕೆ ತಂದು, ಕಾಂಗ್ರೆಸ್ ವಿರುದ್ಧ ಅಧಿಕ ಮತ ಚಲಾಯಿಸಿದರು.

ಚೀನಾದಲ್ಲಿ, 1989 ರಲ್ಲಿ, ಟಿಯಾನನ್ಮೆನ್ ಚೌಕದಲ್ಲಿ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ಶಾಂತಿಯುತ ಆಂದೋಲನಕ್ಕೆ ಸೇರಿದಾಗ, ಆಗಿನ ಚೀನಾದ ಪ್ರಧಾನ ಮಂತ್ರಿ ಡೆಂಗ್ ಕ್ಸಿಯಾಪಿಂಗ್ ಅದನ್ನು ಸೈನ್ಯದ ರೈಫಲ್ ಮತ್ತು ಟ್ಯಾಂಕ್ ಬಳಸಿ ಕ್ರೂರವಾಗಿ ನಿಗ್ರಹಿಸಿದರು.  ಭಿನ್ನಾಭಿಪ್ರಾಯವನ್ನು ಭಾರತ ಮತ್ತು ಚೀನಾ ದೇಶಗಳಲ್ಲಿ ಬಹಳ ವಿಭಿನ್ನವಾಗಿ ಪರಿಗಣಿಸಲಾಗುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರುತ್ತದೆ.

ಗ್ರೇಟ್ ಲೀಪ್ ಫಾರ್ವರ್ಡ್ (ಚೀನಾದ ಕೃಷಿ ಆರ್ಥಿಕತೆಯನ್ನು ಕಮ್ಯುನಿಸ್ಟ್ ಆರ್ಥಿಕತೆಯನ್ನಾಗಿ ಬದಲಾಯಿಸುವ ಕ್ರಮ) ಮತ್ತು ಸಾಂಸ್ಕೃತಿಕ ಕ್ರಾಂತಿ (ಚೀನೀ ಸಮಾಜದಿಂದ ಬಂಡವಾಳಶಾಹಿ ಮತ್ತು ಸಾಂಪ್ರದಾಯಿಕ ಅಂಶಗಳನ್ನು ಬೇರುಸಹಿತ ಕಿತ್ತೊಗೆಯುವ ಚಳುವಳಿ) ನಂತಹ ಅನೇಕ ವಿವಾದಾತ್ಮಕ ನೀತಿಗಳನ್ನು ಚೀನಾ ಪರಿಚಯಿಸಿದೆ.  ಲಕ್ಷಾಂತರ ಜನರು, ರೈತರು, ಕಾರ್ಮಿಕರು, ಬುದ್ಧಿಜೀವಿಗಳು ಮತ್ತು ವಿಜ್ಞಾನಿಗಳು ಮತ್ತು ಇನ್ನೂ ಅನೇಕರು ಇದರ ಫಲವಾಗಿ ಬಳಲುತ್ತಿದ್ದಾರೆ.  ಚೀನಾದ ಒಂದೇ -ಮಗುವಿನ ನೀತಿಯು ಹೆಣ್ಣು ಶಿಶುಹತ್ಯೆ, ಬಲವಂತದ ಗರ್ಭಪಾತ ಮತ್ತು ದಾಖಲೆರಹಿತ ಸಾವಿರಾರು ಮಕ್ಕಳ ಇರುವಿಕೆಗೆ ಕಾರಣವಾಗಿದೆ.

ಸಂಸದ ಮತ್ತು ಬರಹಗಾರ ಶಶಿ ತರೂರ್ ಅವರು ‘ಚೀನಾ ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಿಸಲು ಬಯಸಿದರೆ, ಅದು ತನ್ನ ಹಾದಿಯಲ್ಲಿರುವ ಯಾವುದೇ ಹಳ್ಳಿಗಳನ್ನು ಬುಲ್ಡೊಜ್ ಮಾಡಬಹುದು;  ಭಾರತದಲ್ಲಿ, ನೀವು ಎರಡು ಪಥದ ರಸ್ತೆಯನ್ನು ಅಗಲಗೊಳಿಸಲು ಬಯಸಿದರೆ, ಪರಿಹಾರದ ಅರ್ಹತೆಗಳ ಮೇಲೆ ನಿಮ್ಮನ್ನು ಒಂದು ಡಜನ್ ವರ್ಷಗಳ ಕಾಲ ನ್ಯಾಯಾಲಯದಲ್ಲಿ ಕಟ್ಟಿಹಾಕಬಹುದು ’. ಎಂದು ಉದ್ಗರಿಸಿದ್ದಾರೆ. ಸರ್ಕಾರದ ಅಗಾಧ ಅಧಿಕಾರ ಮತ್ತು ಅದರ ಹಿಡಿತದಲ್ಲಿರುವ ಸಂಪನ್ಮೂಲಗಳ ಕಾರಣದಿಂದಾಗಿ ಅಭಿವೃದ್ಧಿ ವೇಗವಾಗಿ ಸಂಭವಿಸಬಹುದು, ಆದರೆ ಅಂತಹ ಅಭಿವೃದ್ಧಿಯು, ಸರ್ಕಾರವು ತಾನು ಮೇಲೆತ್ತಲು ಆಶಿಸುವ ವರ್ಗಗಳ ಶೋಷಣೆಗೆ ಕಾರಣವಾದರೆ ಅದು ಸರ್ವಥ ವಿದಿತವಲ್ಲ .  ಭಾರತದ ಧ್ಯೇಯ ವಾಕ್ಯ ‘ಯಾರನ್ನೂ ಹಿಂದೆ ಬಿಡುವುದಿಲ್ಲ ‘ ಎಂಬುದು ಕಾರ್ಯತಃ ವಲ್ಲದಿದ್ದರೂ, ಕನಿಷ್ಠ ವಾಚತಃ ಉಳಿದುಕೊಂಡಿದೆ.

ಚೀನಾದಲ್ಲಿ ಹೆಚ್ಚು ವ್ಯಾಪಕವಾದ ಧರ್ಮವೆಂದರೆ ಚೀನೀ ಜಾನಪದ ಧರ್ಮ, ಇದರಲ್ಲಿ ಪೂರ್ವಜ ಮತ್ತು ದೇವತಾ ಪೂಜೆ, ಟಾವೊ ತತ್ತ್ವ, ಕನ್ಫ್ಯೂಷಿಯನಿಸಂ, ಚೈನೀಸ್ ಬೌದ್ಧಧರ್ಮ ಸೇರಿವೆ,ಮತ್ತು ಹೆಚ್ಚಿನ ಹಾನ್ ಚೈನೀಸ್ ತಮ್ಮನ್ನು ಯಾವುದೇ ವಿಶೇಷ ಧರ್ಮಕ್ಕೆ ಸೇರಿದವರು ಎಂದು ಪರಿಗಣಿಸುವುದಿಲ್ಲ.  ಮಾರ್ಕ್ಸ್ವಾದಿ-ಲೆನಿನಿಸ್ಟ್ ನೀತಿ (ಕಮ್ಯುನಿಸ್ಟ್ ಸಿದ್ಧಾಂತದ ಆಧಾರ) ಧಾರ್ಮಿಕ ನಂಬಿಕೆಗಳ ನಿಯಂತ್ರಣ, ನಿಗ್ರಹ ಮತ್ತು ನಿರ್ಮೂಲನೆಯನ್ನು ಪ್ರತಿಪಾದಿಸುತ್ತದೆ.  ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ, ಎಲ್ಲಾ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳನ್ನು ‘ಮೂಢ ನಂಬಿಕೆಗಳು’ ಎಂದು ಪರಿಗಣಿಸಿ ನಿರ್ಮೂಲನೆ ಮಾಡಲಾಯಿತು. ಧಾರ್ಮಿಕ ಸ್ವಾತಂತ್ರ್ಯಗಳನ್ನು ಚೀನಾದಲ್ಲಿ ನಾಮಮಾತ್ರವಾಗಿ ರಕ್ಷಿಸಲಾಗಿದೆ.

ಧರ್ಮವನ್ನು ನಿರ್ಮೂಲನೆ ಮಾಡುವ ಇಂತಹ ಪ್ರಯತ್ನವು ಭಾರತದಲ್ಲಿ ವಿಪತ್ತಿನಲ್ಲಿ ಕೊನೆಗೊಳ್ಳಬಹುದೆಂಬುದು ಹೆಚ್ಚು ಸಂಭವನೀಯ.  ಚೀನಿಯರಂತಲ್ಲದೆ, ಭಾರತೀಯರಿಗೆ ಧರ್ಮವು ದೈನಂದಿನ ಜೀವನದ ಪ್ರಮುಖ ಭಾಗ ಮತ್ತು ಸರಾಸರಿ ಭಾರತೀಯನ ಅಸ್ಮಿತೆ ಕೂಡ.  ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸೀಮಿತ ವ್ಯಾಪ್ತಿಗೆ ಒಂದು ಕಾರಣವೆಂದರೆ ಹಿಂದೂ ಧರ್ಮದ ಅದರ ನಿರಂತರ ವಿರೋಧ ಮತ್ತು ಟೀಕೆ.

ಶ್ರಮಜೀವಿಗಳ (ನಗರ ಕಾರ್ಮಿಕ) ದಂಗೆಯಿಂದ ಚಾಲ್ತಿಯಲ್ಲಿರುವ ಆಡಳಿತವನ್ನು ಹಿಂಸಾತ್ಮಕವಾಗಿ ಉರುಳಿಸಲು ಕಮ್ಯುನಿಸಮ್ ಒತ್ತಾಯಿಸುತ್ತದೆ.  ಪ್ರಜಾಪ್ರಭುತ್ವ ಮತ್ತು ಸುಧಾರಣಾವಾದಿ ವಿಧಾನಗಳಿಂದ ತನ್ನ ಗುರಿಯನ್ನು ಸಾಧಿಸುವುದನ್ನು ಅದು ತಿರಸ್ಕರಿಸುತ್ತದೆ.  ಇದು ಬೌದ್ಧಧರ್ಮ , ಸತ್ಯಾಗ್ರಹ , ಅಹಿಂಸಾವಾದದಂತಹ ಉನ್ನತ ಪರಿಕಲ್ಪನೆಗಳ ತವರೂರಾದ ಮತ್ತು ಕಳೆದ 1000 ವರ್ಷಗಳಿಂದ ಯಾವುದೇ ಪರದೇಶದ ಮೇಲೆ ಆಕ್ರಮಣದಲ್ಲಿ ತೊಡಗದ ಭಾರತದ ಮೂಲ ತತ್ವಗಳಿಗೆ ವಿರೋಧವಾಗಿದೆ. ವಾಸ್ತವವಾಗಿ, ಕಮ್ಯುನಿಸ್ಟ್ ಸಿದ್ಧಾಂತವನ್ನು ಹೊಂದಿರುವ, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ರಚಿಸುವ ವಿಶ್ವದ ಏಕೈಕ ಪಕ್ಷ ಭಾರತೀಯ ಕಮ್ಯುನಿಸ್ಟ್ ಪಕ್ಷವಾಗಿದೆ.

ಕಮ್ಯುನಿಸಂ ಭಾರತಕ್ಕೆ ಸಲ್ಲದು , ಆದರೆ ದೇಶಕ್ಕಾಗಿ ಅಲ್ಲ, ಕನಿಷ್ಠ ತನ್ನ ಜನರಿಗೆ.  ಆದರೆ ಕಮ್ಯುನಿಸಂ ಭಾರತ ಮತ್ತು ಜಗತ್ತಿಗೆ ಸಂಪೂರ್ಣವಾಗಿ ಅಪ್ರಸ್ತುತವಾಗಿದೆಯೇ?  ಮುಂದಿನ ಪೋಸ್ಟ್‌ಗಳಿಗೆ ವಿಷಯ

 

Author: Mahima Prasad

Doctor, dog enthusiast, UPSC aspirant

2 thoughts on “ಭಾರತ ಕಮ್ಯುನಿಸಂ ಅನ್ನು ಅಳವಡಿಸಿಕೊಳ್ಳಬೇಕೆ?”

 1. ಆದರೂ ಕಮ್ಯುನಿಸಂನ ಹಲವಾರು ತತ್ವಗಳು ಭಾರತದ ಬಡವರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಅಲ್ಲಗೆಳೆಯುವಂತಿಲ್ಲ. ಪ್ರಜಾಪ್ರಭುತ್ವದ ಅಡಿಯಲ್ಲಿ ಕಮ್ಯುನಿಸ್ಟ್ ಸರಕಾರವನ್ನು ಸ್ಥಾಪಿಸಿದ ಇಎಂಎಸ್ ನಂಬೂದರಿಪ್ಪಾಡ್ ರವರು ಹಾಕಿಕೊಟ್ಟ ಅಡಿಪಾಯ ಅನನ್ಯವಾದುದು. ಭಾರತದಲ್ಲಿ ಸರಕಾರದ ವತಿಯಿಂದ ಅವರು ಕೇರಳದಲ್ಲಿ ಸಾಧಿಸಿದ ಭೂಸುಧಾರಣಾ ಮತ್ತು ಭೂಮಿ ಹಂಚಿಕೆ ನಂತರ ಹಲವಾರು ರಾಜ್ಯಗಳಲ್ಲಿ ಜಾರಿಗೆ ಬಂತು. ಭೂಸುಧಾರಣೆ ಜಾರಿಯಾಗದೇ ಜಮೀನ್ದಾರಿ ಪದ್ದತಿ ಹಾಗೆಯೇ ಉಳಿಿದ ಉತ್ತರದ ಹಲವಾರು ದೊಡ್ಡ ರಾಜ್ಯಗಳು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವುದನ್ನು ನಾವು ಗಮನಿಸಬಹುದು. ಜಗತ್ತಿನಲ್ಲಿ ಶುದ್ಧ ಬಂಡವಾಳಶಾಹಿ ದೇಶವೂ ಯಾವುದೂ ಇಲ್ಲ. ಶುದ್ದ ಕಮ್ಯುನಿಸ್ಟ್ ದೇಶಗಳೂ ಯಾವುದೂ ಇಲ್ಲ. ಬಂಡವಾಳಶಾಹಿ ವ್ಯವಸ್ಥೆ ಹೇಗೆ ತನ್ನಲ್ಲಿ ತಾನು ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿತೋ ಅದೇ ರೀತಿ ರಷ್ಯಾದ ಪತನದ ನಂತರ ಜೈನೀಸ್ ಕಮ್ಯುನಿಸಂ ಸಹಿತ ತನ್ನಲ್ಲಿ ತಾನು ಹಲವಾರು ಬದವಾವಣೆಗಳನ್ನು ಮಾಡಿಕೊಂಡಿತು. ಕಮ್ಯುನಿಸಂ ಅಡಿಯಲ್ಲಿ ಚೀನಾ ಸಾಧಿಸಿದ ಆರ್ಥಿಕ ಬೆಳವಣಿಗೆ ಜಗತ್ತನ್ನೇ ನಿಬ್ಬೆರಗಾಗಿಸುವಂತಿದೆ. ರಷ್ಯಾದ ಪತನದ ನಂತರ ಬಂಡವಾಳಶಾಹಿ ಅಮೇರಿಕಕ್ಕೆ ಕಮ್ಯುನಿಸ್ಟ್ ಚೀನಾ ದೇಶ ಹಲವಾರು ವಿಷಯಗಳಲ್ಲಿ ಪ್ರಬಲ ಪೈಪೋಟಿ ನೀಡುತ್ತಿದೆ. ಬಹುತೇಕ ಎಮರ್ಜಿಂಗ್ ಟೆಕ್ನಾಲಜಿಗಳಲ್ಲಿ ಚೀನಾದೇಶ ಅಮೇರಿಕಾವನ್ನು ಮೀರಿಸಿ ಮುಂದೆ ಸಾಗುತ್ತಿದೆ. ಕಮ್ಯುನಿಸಂ ಅಪ್ರಸ್ತುತವಾಗಿದೆ ಎಂಬುದು ಕೇವಲ ಬಂಡವಾಳಶಾಹಿಗಳು ಹುಟ್ಟುಹಾಕುತ್ತಿರುವ ಅಪಪ್ರಚಾರವೇ ಹೊರತು ಇನ್ನೇನಲ್ಲ.

  Like

  1. ಕಮ್ಯುನಿಸಂ ನಲ್ಲಿ ಒಳಿತಾದ ವಿಷಯಗಳು ಇವೆ. ಭಾರತವು, ತನಗೆ ಸೂಕ್ತವಾದ ಅಂಶಗಳನ್ನು,‌ಕಮ್ಯುನಿಸಂ‌ ನಿಂದ ಅಳವಡಿಸಿಕೊಂಡಿದೆ.
   ನನ್ನ ಬ್ಲಾಗ ಅನ್ನು ಓದುವುದನ್ನು ದಯಮಾಡಿ ಮುಂದುವರೆಸಿ.

   Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: